ಈಸಯ್ಯ
 	ಕ್ರಿಸ್ತಪೂರ್ವದ ಇಸ್ರೇಲಿನ ಹೀಬ್ರೂ ಮತಧರ್ಮ ಬೋಧಕರಲ್ಲಿ ಮತ್ತು ಪ್ರವಾದಿಗಳಲ್ಲಿ ಪ್ರಖ್ಯಾತನಾದವ. ಈತ ರಚಿಸಿದ ಪ್ರವಾದ 66 ಅಧ್ಯಾಯಗಳಿಂದ ಕೂಡಿದ್ದು ಇತರ ಪ್ರವಾದಗಳಿಗಿಂತ ಹಲವು ರೀತಿಯಲ್ಲಿ ಶ್ರೇಷ್ಠವಾಗಿವೆ. ಕಾವ್ಯಮಯವಾಗಿದ್ದು ಧಾರ್ಮಿಕ ಮತ್ತು ನೈತಿಕದೃಷ್ಟಿಯಿಂದ ಮಹತ್ವಪೂರ್ಣವಾಗಿದೆ. ಕ್ರಿಸ್ತಪೂರ್ವ ಏಳನೆಯ ಶತಮಾನದಲ್ಲಿ ಇಸ್ರೇಲಿನಲ್ಲಿ ಆಂದೋಳನದ ಬಿರುಗಾಳಿ ಬೀಸುತ್ತಿದ್ದಾಗ ಈತ ತನ್ನ ಪ್ರವಾದಗಳನ್ನು ಘೋಷಿಸಿದ.

ಇತರ ಪ್ರವಾದಿಗಳು ತಮ್ಮ ರಚನೆಗಳನ್ನು ಇತಿಹಾಸದ ಘಟನೆಗಳಿಗನುಸಾರವಾಗಿ ಮಾರ್ಪಡಿಸಿದ್ದಾರೆ. ಆದರೆ ಈಸಯ್ಯ ಹಾಗೆ ಮಾಡಿಲ್ಲ. ಕೆಲವು ವೇಳೆ ಈತನ ನುಡಿಗಳು ಐತಿಹಾಸಿಕ ಸತ್ಯವಾಗಿ ಪರಿಣಮಿಸಿಲ್ಲ; ಆದರೂ ಇವನ ಕೃತಿಗಳಲ್ಲಿನ ಕಾವ್ಯ ಸೌಂದರ್ಯ ಹಾಗೆಯೇ ಉಳಿದಿದೆ. ನಿಜವಾದ ಧರ್ಮಕ್ಕೆ ಎಂದಿಗೂ ಚ್ಯುತಿಬಾರದು ಎಂಬ ಇವನ ಅಚಲವಾದ ನಂಬಿಕೆಯನ್ನು ಇವನ ಮಾತುಗಳಲ್ಲಿ ಉದ್ದಕ್ಕೂ ಕಾಣಬಹುದು. 1 ರಿಂದ 33ನೆಯ ಅಧ್ಯಾಯದವರೆಗೆ ಅಸ್ಸೀರಿಯ, ಈಜಿಪ್ಟ್, ಬ್ಯಾಬಿಲಾನ್, ಅರೇಬಿಯ ಮುಂತಾದ ರಾಜ್ಯಗಳ ಅವನತಿಯನ್ನು ಕುರಿತು ಈತ ಹೇಳಿದ್ದಾನೆ. ಆದರೆ ಅವುಗಳಲ್ಲಿ ಹಿಂದಿನ ಪ್ರವಾದಿಗಳ ಸೇಡಿನ ಮನೋಭಾವ ಕಾಣುವುದಿಲ್ಲ. ಅವು ಜೆರೂಸಲೆಂಗೆ ಮಾಡಿರುವ ಅನ್ಯಾಯದ ಮಾತೂ ಇಲ್ಲ. ಇದೇ ಈಸಯ್ಯನ ಪ್ರವಾದಗಳ ವೈಶಿಷ್ಟ್ಯ. ಈತ ರಾಜ್ಯಗಳ ದೈವದ್ರೋಹವನ್ನು ಕ್ರೌರ್ಯವನ್ನು ಕಟುವಾಗಿ ಖಂಡಿಸಿದ್ದಾನೆ. ಇವೇ ಅವುಗಳ ವಿನಾಶಕ್ಕೆ ಕಾರಣವೆಂದಿದ್ದಾನೆ. ತಮ್ಮ ವೈಭವವನ್ನು ಮೆರೆಯುವುದಕ್ಕಾಗಿಯೇ ಅವು ವಿಗ್ರಹಾರಾಧನೆಯನ್ನು ಕೈಗೊಂಡು ತಮ್ಮ ಐಶ್ವರ್ಯದ ಸಂಕೇತಗಳಂತೆ ದೇವಾಲಯಗಳ ಗೋಪುರಗಳನ್ನು ಕಟ್ಟುತ್ತವೆಂದು ಅವಹೇಳನ ಮಾಡಿದ್ದಾನೆ. ಅಂಥ ಧಾರ್ಮಿಕ ಗೋಪುರಗಳು ಬಿದ್ದಾಗಲೇ ಅವುಗಳ ಪುನರುದ್ಧಾರವಾಗುವುದು ಎಂದು ಘೋಷಿಸಿದ್ದಾನೆ. ಬ್ಯಾಬಿಲಾನನ್ನು ಕುರಿತು ಈಸಯ್ಯ ಹೇಳಿರುವ ಕಟೂಕ್ತಿಗಳು ಅಸ್ಸೀರಿಯಕ್ಕೂ ಅನ್ವಯಿಸುತ್ತವೆ. 21ನೆಯ ಅಧ್ಯಾಯದಲ್ಲಿ ಬ್ಯಾಬಿಲಾನಿನ ದುರ್ಗತಿಯನ್ನು ವರ್ಣಿಸಿ ಅದರ ಸಂಸ್ಕøತಿ ವಿನಾಶವಾಗುವುದನ್ನು ಕಂಡು ಮರುಗಿದ್ದಾನೆ. ಹೀಗೆ ಇವನ ದೈವಭಕ್ತಿಯೇ ಇವನ ಕ್ರೂರ ಭವಿಷ್ಯಕ್ಕೆ ಸ್ಫೂರ್ತಿಯನ್ನು ಕೊಟ್ಟಿದೆ, ಸೇಡಿನ ಮನೋಭಾವವಲ್ಲ.

ಜೆರೂಸೆಲಂನಲ್ಲಿ ನಡೆಯುತ್ತಿದ್ದ ಡಾಂಭಿಕ ಮತಾಚರಣೆಗಳನ್ನು ಕಟುವಾಗಿ ಈತ ಖಂಡಿಸಿದ್ದಾನೆ. ದೇವಾಲಯದಲ್ಲಿ ಮೂರ್ತಿ ಪೂಜಕರು ಮಾಡುತ್ತಿದ್ದ ಕಪಟ ಪ್ರಾರ್ಥನೆಗಳನ್ನು ನಿಷೇಧಿಸಿದ್ದಾನೆ. ಆದರೆ ದೇವಾಲಯವನ್ನು ಖಂಡಿಸಿಲ್ಲ. ಅದು ದೈವಭಕ್ತಿಯ ಕೇಂದ್ರವಾಗಬೇಕೆಂದು ನುಡಿದಿದ್ದಾನೆ. ಇಸ್ರೇಲಿನ ಮತಧರ್ಮದಲ್ಲಿ ನವಚೇತನವನ್ನು ತುಂಬಲು ಈತ ಕಾತರಗೊಂಡಿದ್ದ. ಹಿಂದಿನ ಪ್ರವಾದಿಗಳು ವ್ಯಕ್ತಿ ವ್ಯಕ್ತಿಗಳಲ್ಲಿ ಸಾಮಾಜಿಕವಾಗಿ ಇರಬೇಕಾದ ನೀತಿಯನ್ನು ಒತ್ತಿಹೇಳಿದರು. ಆದರೆ ಈತ ರಾಜಕೀಯ ನೀತಿಯನ್ನೂ ವಿಶ್ವಧರ್ಮವನ್ನೂ ಒತ್ತಿ ಹೇಳಿದ. ರಾಷ್ಟ್ರಗಳಲ್ಲಿ ಪರಸ್ಪರ ವೈರದಿಂದಲೂ ದುರಹಂಕಾರದಿಂದಲೂ ಉಂಟಾಗುವ ಯುದ್ಧಗಳು ಕೊಲೆಯಷ್ಟೇ ಪಾಪಕರವೆಂದು ಸಾರಿದ. ಅಂತರರಾಷ್ಟ್ರೀಯ ಸೌಹಾರ್ದವನ್ನೂ ದೈವಿಕ ವಿಶ್ವರಾಷ್ಟ್ರ ರಚನೆಯನ್ನೂ ತನ್ನ ಅಂತಿಮದರ್ಶನದಲ್ಲಿ ಪ್ರಚುರ ಪಡಿಸಿದ. ಇವನ ದೃಷ್ಟಿ ಇಸ್ರೇಲಿಗೆ ಮಾತ್ರ ಪರಿಮಿತವಾಗಿರಲಿಲ್ಲ. ಕೇವಲ ಇಸ್ರೇಲಿನ ಅಭಿವೃದ್ಧಿಗೆ ಇವನ ಹಾರೈಕೆ ಮಿತಿಗೊಂಡಿರದೆ ಇಡೀ ಮಾನವಕುಲದ ಉದ್ಧಾರವನ್ನು ಹಾರೈಸುವುದಾಗಿತ್ತು. ಇಸ್ರೇಲಿನ ರಾಜಮನೆತನಕ್ಕೆ ಶ್ರೇಷ್ಠತೆ ಏನೂ ಇಲ್ಲ; ಭಗವಂತನೇ ಇಸ್ರೇಲಿನ ಸಿಂಹಾಸನಾರೂಢನಾಗಿ ವಿಶ್ವದ ಚಕ್ರಾಧಿಪತ್ಯವನ್ನು ನಡೆಸುತ್ತಾನೆ ಎಂದು ಈತ ನಂಬಿದ್ದ. ಇಸ್ರೇಲ್ ಕೇವಲ ಒಂದು ರಾಜಧಾನಿಯಾಗದೆ ವಿಶ್ವಾಧಿಪತ್ಯದ ಕೇಂದ್ರವಾಗುವುದು ಎಂದು ಈ ಪ್ರವಾದಿಯ ನುಡಿ. ದೇವಾಲಯ ಕೇವಲ ಮತಪ್ರಚಾರ ಪೀಠವಾಗಿರದೆ ವಿಶ್ವದ ನ್ಯಾಯಸ್ಥಾನವಾಗುವುದು. ರಾಷ್ಟ್ರಗಳು ತಮ್ಮ ಕತ್ತಿಗಳನ್ನು ನೇಗಿಲುಗಳಾಗಿ ಭರ್ಜಿಗಳನ್ನು ಕುಡ್ಲುಗಳನ್ನಾಗಿಯೂ ಮಾರ್ಪಡಿಸಿ ಸರಳವಾದ ಕೃಷಿಕ ಜೀವನವನ್ನು ಕೈಗೊಂಡು ಉದ್ಧಾರವಾಗುತ್ತವೆ. ರಾಷ್ಟ್ರಗಳ ಅಧಿಕಾರಲಾಲಸೆ ಕಡಿಮೆಯಾಗಿ ಯುದ್ಧಗಳು ನಿಂತು ಶಾಂತಿ ನೆಲೆಸುತ್ತದೆ-ಎಂಬ ಭವ್ಯಭವಿಷ್ಯವನ್ನು ಈತ ಸಾರಿದ. ಭಗವಂತ ತನ್ನ ಶಾಸನದಿಂದ ಮಾನವಕುಲದ ನೀತಿಯನ್ನು ನೆಲೆಗೊಳಿಸುತ್ತಾನೆ ಎಂಬ ನಂಬಿಕೆಯನ್ನು ಘೋಷಿಸಿದ. ಆದರೆ ಇವನ ಆಕಾಂಕ್ಷೆಯನ್ನು ಸಮಾಜ ಮನ್ನಿಸದೆ ಇರುವುದನ್ನು ಕಂಡು ಹತಾಶನಾಗಿ 40 ವರ್ಷಗಳ ಅನಂತರ ಪುನಃ ಇಸ್ರೇಲಿನ ಶೋಚನೀಯ ಅವಸ್ಥೆಯನ್ನು ಕುರಿತು ಆಗ್ರಹಗೊಂಡ. ಅಸ್ಸೀರಿಯದಂಥ ಅದೈವಿಕವಾದ ರಾಷ್ಟ್ರಗಳು ವಿನಾಶವಾಗುವುದು ಖಂಡಿತ. ಕೆಲವರು ಮಾತ್ರ ದೈವಭಕ್ತಿಯಿಂದ ಭಗವಂತನ ಕೃಪೆಗೆ ಪಾತ್ರರಾಗಿ ಇಸ್ರೇಲಿನ್ನು ಉಳಿಸಿಕೊಳ್ಳುವರು. ಅಭಿವೃದ್ಧಿಗೆ ಕಾರಣರಾಗುವರು ಎಂಬ ಭವಿಷ್ಯ ನುಡಿದ.
 
ಹೀಗೆ ಹೀಬ್ರೂ ಮತಕ್ಕೆ ಒಂದು ವಿಶ್ವಧರ್ಮದ ಸ್ಥಾನವನ್ನು ಕಲ್ಪಿಸುವ ಪ್ರತಿಭೆಯಿಂದ ರೂಪುಗೊಂಡ ಇವನ ಜೀವನ ಚಿರಸ್ಮರಣೀಯವಾಯಿತು. ವಿಶ್ವವ್ಯಾಪಕವಾದ ಏಕದೇವತಾ ವಾದವನ್ನು ಮೊಟ್ಟಮೊದಲು ನಿರೂಪಿಸಿದ ಮಹಾಪುರುಷ ಈತ ಎನ್ನಬಹುದು. 							
	(ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ